ಸಾಲಗಾರರ ಸಹಕಾರ ಸಂಘಕ್ಕೆ ಸ್ಯಾಂಡಲ್ ವುಡ್ ಅಧ್ಯಕ್ಷ ಶರಣ್ ದನಿ
SNLNS ಎಂಟರ್ಟೈನರ್ಸ್ ಹಾಗೂ ಹವಿಶ್ ಸಿನಿ ಕ್ರಿಯೇಶನ್ಸ್ ಅಡಿಯಲ್ಲಿ ಕುಮರೇಶ್.ಎ ಮತ್ತು ಸುನೀಲ್ಕುಮಾರ್ (ಪಟ್ಟಣಗೆರೆ) ಜಂಟಿಯಾಗಿ ನಿರ್ಮಾಣ ಮಾಡಿರುವ ಸಾಲಗಾರರ ಸಹಕಾರ ಸಂಘ ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಜ್ಯೋತಿಷ್ ವಿದ್ವಾನ್ ಡಾ.ಶ್ರೀಧರ್ ಗುರೂಜಿ ಮತ್ತು ನಟಿ ಬೃಂದಾ ಆಚಾರ್ಯ ಅವರು ಬಂದು ಚಿತ್ರತಂಡಕ್ಕೆ ಶುಭಕೋರಿದರು.
ಚಿತ್ರದ ಟೈಟಲ್ ಸಾಂಗ್ ಅನ್ನು ಸ್ಯಾಂಡಲ್ವುಡ್ ಅಧ್ಯಕ್ಷ ಶರಣ್ ಹಾಡಿದ್ದು, ಎಂ.ಎಸ್.ತ್ಯಾಗರಾಜ್ ಹಾಡನ್ನು ಬರೆದು ಮತ್ತು ರಾಗ ಸಂಯೋಜಿಸಿದ್ದಾರೆ. ವಿಕ್ರಮ್ ಧನಂಜಯ್.ಆರ್ ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಧನಂಜಯ್ ನಿರ್ದೇಶನದ ಮೂರು ಚಿತ್ರಗಳಿಗೂ ನಿರ್ಮಾಪಕರು ಮತ್ತು ನಿರ್ದೇಶಕರು ಒಬ್ಬರೇ ಎಂಬುದು ವಿಶೇಷ.
“ನಾಲ್ಕು ನಿರುದ್ಯೋಗಿ ಯುವಕರು ಕಾರಣ ಇಲ್ಲದೆ ಸಾಲ ಮಾಡುತ್ತಾರೆ. ನಂತರ ಬಡ್ಡ್ಡಿ ಕಟ್ಟಲು ಮತ್ತೆ ಸಾಲದ ಹಿಂದೆ ಹೋಗುತ್ತಾರೆ.
ಕೊನೆಗೆ ಅಸಹಾಯಕ ಪರಿಸ್ಥಿತಿ ಬಂದಾಗ ನಮ್ಮಂತೆ ಸಾಲ ಮಾಡಿರುವವರನ್ನು ಒಗ್ಗೂಡಿಸಿ ಸಂಘ ಶುರು ಮಾಡಿ ಸರ್ಕಾರಕ್ಕೆ ಒಂದಷ್ಟು ಬೇಡಿಕೆ ಇಡುತ್ತಾರೆ. ಅದು ಏನು? ಸರ್ಕಾರವು ಯಾವ ರೀತಿ ಸ್ಪಂದನೆ ಕೊಡುತ್ತದೆ? ಎಂಬುದನ್ನು ತಿಳಿಯಲು ಚಿತ್ರ ನೋಡಬೇಕು“ ಎಂದು ನಿರ್ದೇಶಕರು ಹೇಳಿದರು.
ಚಿತ್ರದಲ್ಲಿ ಪ್ರಮುಖವಾಗಿ ಕೆಂಪೆಗೌಡ, ಜಾಲಿ ಜಾಲಿ ಜಾಕ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಮತ್ತು ಪ್ರವೀಣ್ಕುಮಾರ್, ಪೂಜಾ, ರಂಗಾಯಣರಘು, ಹೊನ್ನವಳ್ಳಿಕೃಷ್ಣ, ಲಕ್ಷೀಸಿದ್ದಯ್ಯ ಮುಂತಾದವರು ನಟಿಸಿದ್ದಾರೆ.
ಛಾಯಾಗ್ರಹಣ ಅನಿರುದ್ದ್, ಸಂಕಲನ ಗಣೇಶ್ ನಿರ್ಚಾಲ್-ಶೇಷಾಚಲ ಕುಲಕರ್ಣಿ ಅವರದಾಗಿದೆ. ಬೆಂಗಳೂರು, ತೀರ್ಥಹಳ್ಳಿ, ಚಿಕ್ಕಮಗಳೂರು ಸುಂದರ ತಾಣಗಳಲ್ಲಿ 45 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
ಕಾಮಿಡಿ ಕಿಲಾಡಿಗಳು ಕಲಾವಿದರುಗಳಾದ ಶಿವರಾಜ್.ಕೆ.ಆರ್.ಪೇಟೆ, ದಿವ್ಯಶ್ರೀ ಮೋಹನ್, ಗೋವಿಂದೆಗೌಡ, ಮಡೆನೂರು ಮನು, ರೀಲ್ಸ್ದಲ್ಲಿ ಹೆಸರು ಮಾಡುತ್ತಿರು ಬಿಗ್ ಬಾಸ್ನ ಸೋನುಶ್ರೀನಿವಾಸಗೌಡ, ನಟ ಸನತ್, ನಟಿ ದಿವ್ಯಾಗೌಡ ಹಾಜರಿದ್ದು ತಂಡಕ್ಕೆ ಶುಭಹಾರೈಸಿದರು.