ಬಘೀರ ಕ್ಯಾಮೆರಾಮನ್ ಎಜೆ ಶೆಟ್ಟಿ ಈಗ ಡೈರೆಕ್ಟರ್, ಗಮನ ಸೆಳೆಯುತ್ತಿದೆ ‘ಭೂರಮೆ’
ಒಟ್ಟಿನಲ್ಲಿ ಸ್ಟಾರ್ ಸಿನಿಮಾಗಳಿಗೆ ಕ್ಯಾಮೆರಾ ಹಿಡಿದು ಸೈ ಎನಿಸಿಕೊಂಡಿದ್ದ ಎಜೆ ಶೆಟ್ಟಿ, ಈಗ 'ಭೂರಮೆ' ಆಲ್ಬಂ ಸಾಂಗ್ ಮೂಲಕ ಡೈರೆಕ್ಟರ್ ಆಗಿಯೂ ಭರವಸೆ ಮೂಡಿಸಿದ್ದಾರೆ
‘ಕಿಸ್’, ‘ಕಬ್ಜ’ ಹಾಗೂ ಇತ್ತೀಚಿನ ಬ್ಲಾಕ್‌ಬಸ್ಟರ್ ‘ಬಘೀರ’ ಸಿನಿಮಾಗಳಿಗೆ ತಮ್ಮ ಅದ್ಭುತ ಕ್ಯಾಮೆರಾ ಕೈಚಳಕದ ಮೂಲಕ ಗಮನ ಸೆಳೆದಿದ್ದ ಖ್ಯಾತ ಛಾಯಾಗ್ರಾಹಕ ಎಜೆ ಶೆಟ್ಟಿ ಈಗ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಹೌದು, ಎಜೆ ಶೆಟ್ಟಿ ಅವರು ಇದೀಗ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟು ‘ಭೂರಮೆ’ ಎಂಬ ಚೊಚ್ಚಲ ಆಲ್ಬಂ ಸಾಂಗ್ ನಿರ್ದೇಶಿಸಿದ್ದಾರೆ.
ಯುವ ಪ್ರತಿಭೆಗಳಾದ ಅಥರ್ವ ವಿಶ್ವನಾಥ್ ಹಾಗೂ ಸುಷ್ಮಿತಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಹಾಡಿನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕರುಗಳಾದ ಎಪಿ ಅರ್ಜುನ್, ಚೇತನ್ ಕುಮಾರ್ ಹಾಗೂ ಪವನ್ ಒಡೆಯರ್ ವಿಶೇಷ ಅತಿಥಿಗಳಾಗಿ ಆಗಮಿಸಿ, ಹೊಸಬರ ತಂಡಕ್ಕೆ ಬೆನ್ನುತಟ್ಟಿ ಹಾರೈಸಿದರು.
ಸಿನಿಮಾ ಜರ್ನಿಯ ಮೊದಲ ಹೆಜ್ಜೆ: ನಟ ಅಥರ್ವ ವಿಶ್ವನಾಥ್
ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಯುವ ನಟ ಅಥರ್ವ ವಿಶ್ವನಾಥ್, ‘ಭೂರಮೆ’ ಇಷ್ಟು ರಿಚ್ ಕ್ವಾಲಿಟಿಯಲ್ಲಿ ಬರಲು ನನ್ನ ಎಲ್ಲಾ ಸ್ನೇಹಿತರೇ ಕಾರಣ. ನಾನು ಈ ಹೊಸ ಹೆಜ್ಜೆ ಇಟ್ಟಾಗ ನನ್ನ ತಂದೆ-ತಾಯಿ ಬೆನ್ನೆಲುಬಾಗಿ ನಿಂತರು. ಮುಂದೆ ಸಿನಿಮಾ ಮಾಡಬೇಕೆಂಬ ಆಸೆಯಿರುವ ನಮಗೆ ಇದು ಮೊದಲ ಹೆಜ್ಜೆ. ಈ ಹಾಡಿನ ರಿಸಲ್ಟ್‌ಗಾಗಿ ಎಜೆ ಶೆಟ್ಟಿಯವರು ಸಾಕಷ್ಟು ಶ್ರಮವಹಿಸಿದ್ದಾರೆ. ಈಗ ಈ ಪ್ರೀತಿಯ ಕಾಣಿಕೆಯನ್ನು ನಿಮ್ಮ ಮಡಿಲಿಗೆ ಹಾಕಿದ್ದೇವೆ. ನೋಡಿ, ಹರಸಿ. ಏನಾದರೂ ತಪ್ಪಿದ್ದರೆ ಹೇಳಿ, ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುತ್ತೇವೆ” ಎಂದು ವಿನಂತಿಸಿಕೊಂಡರು.
6 ನಿಮಿಷದಲ್ಲಿ ಭಾವನಾತ್ಮಕ ಕಥೆ: ನಿರ್ದೇಶಕ ಎಜೆ ಶೆಟ್ಟಿ
ತಮ್ಮ ಚೊಚ್ಚಲ ನಿರ್ದೇಶನದ ಅನುಭವ ಹಂಚಿಕೊಂಡ ಎಜೆ ಶೆಟ್ಟಿ, “ನಾನು ಚಿತ್ರರಂಗಕ್ಕೆ ಬಂದಿದ್ದೇ ಸಿನಿಮಾ ನಿರ್ದೇಶಕನಾಗಬೇಕು ಅನ್ನೋ ಕನಸು ಹೊತ್ತು. ಆ ಕನಸಿನ ಮೊದಲ ಹೆಜ್ಜೆಯೇ ಈ ‘ಭೂರಮೆ’ ಹಾಡು.
ಮಣಿ ರತ್ನಂ ಅವರ ‘ಪಲ್ಲವಿ ಅನುಪಲ್ಲವಿ’ ಸಿನಿಮಾದ ಫೀಲಿಂಗ್‌ನಲ್ಲಿ ಈ ಹಾಡನ್ನು ಮೂಡಿಸಬೇಕು ಎಂಬ ಆಸೆ ನನಗಿತ್ತು. ಅದಕ್ಕೆ ತಕ್ಕಂತೆ ಸಂಗೀತ ನಿರ್ದೇಶಕಿ ಪ್ರಿಯಾ ಮಾಲಿ ಕೇವಲ ಎರಡೇ ನಿಮಿಷದಲ್ಲಿ ಅದ್ಭುತ ಟ್ಯೂನ್ ಮಾಡಿಕೊಟ್ಟರು. ಅವರು ನಿಜಕ್ಕೂ ಸೂಪರ್ ಫಾಸ್ಟ್. ಕೇವಲ ಆರು ನಿಮಿಷಗಳ ಈ ಹಾಡಿನಲ್ಲಿ ಒಂದು ಸುಂದರವಾದ ಭಾವನಾತ್ಮಕ ಕಥೆಯನ್ನು ಹೇಗೆ ಹೇಳಬಹುದು ಎಂಬುದನ್ನು ಈ ಹಾಡಿನ ಮೂಲಕ ಪ್ರಯತ್ನಿಸಿದ್ದೇವೆ” ಎಂದು ಮಾಹಿತಿ ನೀಡಿದರು.
ಟ್ವಿಸ್ಟ್ & ಟರ್ನ್ ಗಳ ಜರ್ನಿ:
ಪ್ರೀತಿ, ಕನಸುಗಳು ಹಾಗೂ ನೆನಪುಗಳ ಭಾವನಾತ್ಮಕ ಪ್ರಯಾಣವನ್ನು ‘ಭೂರಮೆ’ ಹಾಡಿನ ಮೂಲಕ ಎಜೆ ಶೆಟ್ಟಿ ಸೊಗಸಾಗಿ ಕಟ್ಟಿ ಕೊಟ್ಟಿದ್ದಾರೆ. ಕೇವಲ ನಿರ್ದೇಶನ ಮಾತ್ರವಲ್ಲದೆ, ತಮ್ಮ ಎಂದಿನ ಶೈಲಿಯಲ್ಲಿ ಹಾಡನ್ನು ಅತ್ಯಂತ ಸುಂದರವಾಗಿ ಕ್ಯಾಪ್ಚರ್ ಕೂಡ ಮಾಡಿದ್ದಾರೆ.
ಪೆನ್ ಮತ್ತು ಪೇಪರ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ತಯಾರಾಗಿರುವ ಈ ಆಲ್ಬಂನಲ್ಲಿ ಅಥರ್ವ ವಿಶ್ವನಾಥ್ ಮತ್ತು ಸುಶ್ಮಿತಾ ಶೆಟ್ಟಿ ನಟಿಸಿದ್ದಾರೆ. ಭೂರಮೆಗೆ ನಾಗಾರ್ಜುನ್ ಶರ್ಮ ಸಾಹಿತ್ಯ, ಪ್ರಿಯಾಮಾಲಿ ಸಂಗೀತವಿರುವ ಈ ಹಾಡಿಗೆ ಹರ್ಷ ಮತ್ತು ಪ್ರಿಯಾಮಾಲಿ ದನಿಯಾಗಿದ್ದಾರೆ. ಅಜಯ್‌ಕುಮಾರ್ ಸಂಕಲನ ಈ ಹಾಡಿಗಿದೆ. ಇನ್ನು ಈ ಹಾಡನ್ನು PRK ಆಡಿಯೋ ಯುಟ್ಯೂಬ್ ಚಾನಲ್‌ನಲ್ಲಿ ನೋಡಬಹುದು.