‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಒಟಿಟಿಯಲ್ಲಿ ಹೊಸ ದಾಖಲೆ: 25 ಕೋಟಿ+ ನಿಮಿಷ ವೀಕ್ಷಣೆ
ಕನ್ನಡ ಚಿತ್ರರಂಗದ ವಿಶಿಷ್ಟ ಕಥಾಹಂದರವುಳ್ಳ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಗಮನಸೆಳೆಯುತ್ತಿರುವ ಬೆನ್ನಲ್ಲೇ, ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ (Second Case of Seetharam) ಚಿತ್ರವು ಒಟಿಟಿ (OTT) ಲೋಕದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದೆ.
ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಭಾರತದ ‘ಟಾಪ್ 10’ ಸಿನಿಮಾಗಳ ಪಟ್ಟಿಯಲ್ಲಿ ಸತತ 15 ವಾರಗಳಿಂದ ತನ್ನ ಸ್ಥಾನವನ್ನು ಕಾಯ್ದುಕೊಳ್ಳುವ ಮೂಲಕ, ಬರೋಬ್ಬರಿ 250 ಮಿಲಿಯನ್‌ಗಿಂತಲೂ ಹೆಚ್ಚು (25 ಕೋಟಿಗೂ ಅಧಿಕ) ಸ್ಟ್ರೀಮಿಂಗ್ ನಿಮಿಷಗಳನ್ನು ಪೂರೈಸಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಪ್ರೇಕ್ಷಕರನ್ನು ಕಟ್ಟಿಹಾಕಿದ ಕಥೆ ಮತ್ತು ನಟನೆ
ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ವಿಜಯ್ ರಾಘವೇಂದ್ರ, ಗೋಪಾಲಕೃಷ್ಣ ದೇಶಪಾಂಡೆ ಹಾಗೂ ಸಾಗರ್ ಪುರಾಣಿಕ್ ತಮ್ಮ ನೈಜ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಬಿಗಿಯಾದ ಚಿತ್ರಕಥೆ ಮತ್ತು ತಾರಾಗಣದ ಅದ್ಭುತ ನಟನೆಯೇ ಈ ಸಿನಿಮಾ ಒಟಿಟಿಯಲ್ಲಿ ವಾರದಿಂದ ವಾರಕ್ಕೆ ಹೆಚ್ಛಿನ ವೀಕ್ಷಕರನ್ನು ತಲುಪಲು ಮುಖ್ಯ ಕಾರಣವಾಗಿದೆ.
ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಅವರು ಸಸ್ಪೆನ್ಸ್, ಭಾವನಾತ್ಮಕ ಅಂಶಗಳು ಮತ್ತು ನೈಜತೆಯನ್ನು ಸಂಯೋಜಿಸಿ ಈ ಥ್ರಿಲ್ಲರ್ ಚಿತ್ರವನ್ನು ತೆರೆಗೆ ತಂದಿದ್ದಾರೆ. ಈ ವರ್ಷ ಒಟಿಟಿ ಲೋಕದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾದ ಪ್ರಮುಖ ಕನ್ನಡ ಥ್ರಿಲ್ಲರ್ ಸಿನಿಮಾಗಳಲ್ಲಿ ಇದು ಮುಂಚೂಣಿಯಲ್ಲಿದೆ.
ಖ್ಯಾತ ನಿರ್ಮಾಪಕ ಪವನ್ ಒಡೆಯರ್ ಅವರು ಈ ಚಿತ್ರವನ್ನು ಪ್ರಸ್ತುತಪಡಿಸಿದ್ದು, ಅವರ ಬೆಂಬಲವು ಸಿನಿಮಾವನ್ನು ದೇಶಾದ್ಯಂತ ತಲುಪಿಸಲು ನೆರವಾಗಿದೆ. ದೇವಿಪ್ರಸಾದ್ ಶೆಟ್ಟಿ ಹಾಗೂ ಸಾತ್ವಿಕ್ ಹೆಬ್ಬಾರ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲೂ ಲಭ್ಯವಿದ್ದು, ಭಾರಿ ಯಶಸ್ಸು ಕಾಣುತ್ತಿದೆ.
ಸ್ಯಾಂಡಲ್‌ವುಡ್‌ಗೆ ಸಿಕ್ಕ ದೊಡ್ಡ ಗೌರವ
ಒಟಿಟಿ ವೇದಿಕೆಯಲ್ಲಿ 250+ ಮಿಲಿಯನ್ ನಿಮಿಷಗಳ ವೀಕ್ಷಣೆ ಪಡೆಯುವುದು ಮತ್ತು ಸತತ 15 ವಾರಗಳ ಕಾಲ ಟಾಪ್ 10 ಪಟ್ಟಿಯಲ್ಲಿ ಮುಂದುವರಿಯುವುದು ಅಪರೂಪದ ಸಾಧನೆ.
ಈ ಯಶಸ್ಸು ಭಾರತೀಯ ಚಿತ್ರರಂಗದಲ್ಲಿ ಕನ್ನಡ ಸಿನಿಮಾಗಳ ಕಥೆ ಹೇಳುವ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದ್ದು, ಇಡೀ ಸ್ಯಾಂಡಲ್‌ವುಡ್ ಹೆಮ್ಮೆಪಡುವಂತೆ ಮಾಡಿದೆ.