ದಿ ರೂರಲ್ ಕಾಲೇಜಿನಲ್ಲಿ ಜಾನಪದ ಕಮ್ಮಟ ಹಾಗೂ ಕಂಸಾಳೆ ತರಬೇತಿ
ದಿ ರೂರಲ್ ಕಾಲೇಜಿನ ಕನ್ನಡ ವಿಭಾಗದಿಂದ ಆಯೋಜಿಸಲಾದ 'ಕನ್ನಡ ವಿಚಾರ ವೇದಿಕೆ ಉದ್ಘಾಟನೆ ಮತ್ತು ಜಾನಪದ ಕಮ್ಮಟ' ಕಾರ್ಯಕ್ರಮದ ಸಮಗ್ರ ವರದಿ. ಜಾನಪದ ವೈಶಿಷ್ಟ್ಯತೆ, ಕಂಸಾಳೆ ತರಬೇತಿ ಹಾಗೂ ಪ್ರಮುಖ ಗಣ್ಯರ ಉಪಸ್ಥಿತಿಯ ವಿಶೇಷ ವಿವರ ಇಲ್ಲಿದೆ.
ಕನಕಪುರ: ದಿ ರೂರಲ್ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ‘ಕನ್ನಡ ವಿಚಾರ ವೇದಿಕೆ ಉದ್ಘಾಟನೆ ಮತ್ತು ಜಾನಪದ ಕಮ್ಮಟ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.
AI ಯುಗದಲ್ಲೂ ಜಾನಪದ ಸಂಸ್ಕೃತಿ ಉಳಿಯಲಿ:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಡಾ|| ಎಚ್. ಕೆ. ಶ್ರೀಕಂಠ ಅವರು, “ಜನಪದವೇ ನಮ್ಮ ಮೂಲ ಸಂಸ್ಕೃತಿಯಾಗಿದ್ದು, ಇದನ್ನು ನಮ್ಮ ಗ್ರಾಮೀಣ ಹಾಗೂ ಸಾಮಾನ್ಯ ಜನರೇ ಬೆಳೆಸಿ ಜೀವಂತವಾಗಿ ಉಳಿಸಿಕೊಂಡು ಬಂದಿದ್ದಾರೆ.
ಇಂದಿನ AI ಮತ್ತು ಆಧುನಿಕ ಯುಗದಲ್ಲಿ ಜಾನಪದ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದ್ದು, ಹೊಸ ತಲೆಮಾರಿನ ಯುವಜನತೆ ಜಾನಪದ ಗೀತೆ, ನಾಟಕ ಹಾಗೂ ಕಥೆಗಳ ಬಗ್ಗೆ ಹೆಚ್ಚಿನ ಆಸಕ್ತಿ ತಿಳಿಯಬೇಕಿದೆ. ಸಿನಿಮಾ ಮತ್ತು ಮೊಬೈಲ್ ತಂತ್ರಜ್ಞಾನ ಬೆಳೆದಂತೆ, ನಮ್ಮ ಜಾನಪದ ಸಂಸ್ಕೃತಿಯು ಕೂಡ ಬೆಳೆದು ಒಂದು ಪ್ರಭಾವಿ ಮಾಧ್ಯಮವಾಗಿ ಉಳಿಯಬೇಕು“ ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟನೆ ಹಾಗೂ ಗೋಷ್ಠಿಗಳು:
ಕಾರ್ಯಕ್ರಮವನ್ನು ಮಾಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರೂ ಹಾಗೂ ಜಾನಪದ ವಿದ್ವಾಂಸರಾದ ಡಾ. ರಾಜು ಗುಂಡಾಪುರ ಅವರು ಉದ್ಘಾಟಿಸಿ ಶುಭಕೋರಿದರು.
ಮೊದಲ ಗೋಷ್ಠಿ: ಜಾನಪದ ಲೋಕದ ಕ್ಯುರೇಟರ್ ಹಾಗೂ ಜಾನಪದ ವಿದ್ವಾಂಸರಾದ ಡಾ. ರವಿ ಯು.ಎಂ. ಅವರು ‘ಜಾನಪದ ಕಲೆಗಳ ವೈಶಿಷ್ಟ್ಯತೆ‘ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಎರಡನೇ ಗೋಷ್ಠಿ: ಬೀಸುಕಂಸಾಳೆ ಕಲಾವಿದರಾದ ಶ್ರೀ ಗುರುಮಾದಪ್ಪ ಅವರು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಕಂಸಾಳೆ ತರಬೇತಿ ನೀಡಿದರು.
ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಎಸ್. ಕೆಂಪೇಗೌಡ, ಉಪಪ್ರಾಂಶುಪಾಲರಾದ ಡಾ. ಅಪ್ಪಾಜಿ ಹೆಚ್.ಬಿ. ಹಾಗೂ IQAC ಸಂಯೋಜಕರಾದ ಡಾ. ಎ.ಪಿ. ಪ್ರಕಾಶ್ ಅವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಆಯೋಜನೆ ಮತ್ತು ನಿರ್ವಹಣೆಯನ್ನು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ದೀಪಿಕಾ ಬಿ., ಸಂಚಾಲಕರಾದ ಡಾ. ಪ್ರಸನ್ನ ಹಾಗೂ ವಿಭಾಗದ ಎಲ್ಲಾ ಪ್ರಾಧ್ಯಾಪಕ ವೃಂದದವರು ಯಶಸ್ವಿಯಾಗಿ ನೆರವೇರಿಸಿಕೊಟ್ಟರು.