ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ ಟೀಸರ್ ಔಟ್
ಡಾ. ವಿ. ನಾಗೇಂದ್ರ ಪ್ರಸಾದ್ ಅಭಿನಯದ ‘ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಟೀಸರ್ ರಿಲೀಸ್
ಖ್ಯಾತ ಗೀತಾರಚನೆಕಾರ ಹಾಗೂ ಅಭಿನೇತ ಡಾ. ವಿ. ನಾಗೇಂದ್ರ ಪ್ರಸಾದ್ ಅವರ ಪ್ರಮುಖ ಅಭಿನಯದ ‘ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಚಲನಚಿತ್ರದ ಟೀಸರ್ ಇತ್ತೀಚೆಗೆ ಭವ್ಯವಾಗಿ ಲೋಕಾರ್ಪಣೆಗೊಂಡಿದೆ. ‘ಕವಿರತ್ನ ಸಾರ್ಥಕ ಸುವರ್ಣ’ ವೇದಿಕೆಯಲ್ಲಿ ನಾದಬ್ರಹ್ಮ ಹಂಸಲೇಖ ಅವರು ಟೀಸರ್ ರಿಲೀಸ್ ಮಾಡಿ, ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಸಾಮಾಜಿಕ ಹಾಗೂ ರಾಜಕೀಯ ರಂಗದಲ್ಲಿ ಕನ್ನಡ ಭಾಷೆಯ ಮಹತ್ವದ ಸುತ್ತ ಸಾಗುವ ಈ ‘ಸೋಶಿಯೋ-ಪೊಲಿಟಿಕಲ್ ಲಿಂಗ್ವಿಸ್ಟಿಕ್’ ಕಥಾವಸ್ತುವಿನ ಸಿನಿಮಾವನ್ನು ಗುರುಪ್ರಸಾದ್ ಚಂದ್ರಶೇಖರ್ ಅವರು ಚೊಚ್ಚಲ ಬಾರಿಗೆ ನಿರ್ದೇಶಿಸಿದ್ದಾರೆ.
ಭಾಷಾಭಿಮಾನ ಮತ್ತು ರಾಜಕೀಯದ ರೋಚಕ ಕಥೆ
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಗುರುಪ್ರಸಾದ್ ಚಂದ್ರಶೇಖರ್, “ನಮ್ಮ ನಾಡು, ನುಡಿ ಹಾಗೂ ಅದರ ಸುತ್ತ ನಡೆಯುವ ಸಾಮಾಜಿಕ-ರಾಜಕೀಯ ವಿದ್ಯಮಾನಗಳೇ ಈ ಚಿತ್ರದ ಜೀವಾಳ. ಪ್ರೇಕ್ಷಕರಲ್ಲಿ ಕುತೂಹಲ ಕಾಯ್ದುಕೊಳ್ಳಲು ಟೀಸರ್ನಲ್ಲಿ ನಾಗೇಂದ್ರ ಪ್ರಸಾದ್ ಅವರ ನಾಯಕನ ಪಾತ್ರ ಮತ್ತು ರಾಜಕೀಯ ಹಾದಿಯನ್ನು ಮಾತ್ರ ತೋರ್ಪಡಿಸಲಾಗಿದೆ” ಎಂದು ತಿಳಿಸಿದರು.
ಇವರು ಹಿಂದೆ ‘ಸೆಕೆಂಡ್ ಹಾಫ್’ ಮತ್ತು ‘ಗಾಂಧಿ ಮತ್ತು ನೋಟು’ ಚಿತ್ರಗಳಿಗೆ ಕಥೆಗಾರರಾಗಿ ಹಾಗೂ ಸಹಾಯಕ ನಿರ್ದೇಶಕರಾಗಿ ಅನುಭವ ಹೊಂದಿದ್ದಾರೆ.
ಚಿತ್ರದಲ್ಲಿ ನಾಯಕನು ದೇವರ ಹೆಸರಿನಲ್ಲಿ ಆಣೆ ಮಾಡಿ ಸಮಾಜದಲ್ಲಿ ತರುವ ಕ್ರಾಂತಿಕಾರಿ ಬದಲಾವಣೆಗಳು ಹಾಗೂ ಕಾಲಘಟ್ಟಕ್ಕೆ ತಕ್ಕಂತೆ ಅವರ ಪಾತ್ರ ಪಡೆಯುವ ವಿವಿಧ ಆಯಾಮಗಳು ಕಥೆಯ ಪ್ರಮುಖ ಜೀವಾಳವಾಗಿವೆ.
ಸಂಗೀತ ಸಂಯೋಜನೆ ಹಾಗೂ ಹಾಡುಗಳು
ಚಿತ್ರಕ್ಕೆ ಚರಣ್ ಅರ್ಜುನ್ ಅವರು ಇಂಪಾದ ಸಂಗೀತ ನೀಡಿದ್ದು, ಉತ್ತರ ಕರ್ನಾಟಕ ಶೈಲಿಯ ಜಾನಪದ ಭಜನೆ ಹಾಗೂ ಬಿಟ್ ಗೀತೆಗಳು ಪ್ರೇಕ್ಷಕರ ಗಮನ ಸೆಳೆಯಲಿವೆ.ಚಿತ್ರದ ಎರಡು ಹಾಡುಗಳಿಗೆ ಸ್ವತಃ ಡಾ. ವಿ. ನಾಗೇಂದ್ರ ಪ್ರಸಾದ್ ಅವರೇ ಸಾಹಿತ್ಯ ರಚಿಸಿದ್ದಾರೆ. ವಿಶೇಷವೆಂದರೆ, ನಾಗೇಂದ್ರ ಪ್ರಸಾದ್ ಬರೆದಿರುವ ‘ಕನ್ನಡ ನನ್ನ ಕನ್ನಡ’ ಗೀತೆಯನ್ನು ಕಳೆದ ವರ್ಷದ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅನಾವರಣಗೊಳಿಸಿದ್ದರು.
ನಿರ್ಮಾಣ ಮತ್ತು ತಾಂತ್ರಿಕ ಬಳಗ
ಈ ಬಿಗ್ ಬಜೆಟ್ ಚಿತ್ರವನ್ನು ಬಿ ವಿ ಎಮ್ ಕ್ರಿಯೇಷನ್ಸ್ ಸಂಸ್ಥೆಯ ಬಿ. ಶಿವಶಂಕರ್, ಡಿ ಎಲ್ ವಿ ಪ್ರೊಡಕ್ಷನ್ಸ್ ಸಂಸ್ಥೆಯ ದತ್ತಾತ್ರೇಯ ಜಮಾದಾರ್ ಹಾಗೂ ಅನಿಕೇತನ ಪಿಕ್ಚರ್ಸ್ ಸಂಸ್ಥೆಯ ಶಶಿಪ್ರಸಾದ್ ಚಂದ್ರಶೇಖರ್ ಜಂಟಿಯಾಗಿ ನಿರ್ಮಿಸುತ್ತಿದ್ದು ಶೃತಿ ವಾಲೆ ಅವರು ಸಹ-ನಿರ್ಮಾಪಕಿಯಾಗಿದ್ದಾರೆ.
ಈ ಸಿನಿಮಾದಲ್ಲಿ ಡಾ. ವಿ. ನಾಗೇಂದ್ರ ಪ್ರಸಾದ್ ಅವರೊಂದಿಗೆ ವೈಜನಾಥ್ ಬಿರಾದಾರ್, ಡಿಂಪನ ಜೀವನ್, ಅಶ್ವಿತಾ ಹೆಗಡೆ, ಬಾಲ ರಾಜವಾಡಿ, ಪ್ರದೀಪ್ ಪೂಜಾರಿ, ಶ್ರೀನಾಥ್ ವಶಿಷ್ಠ, ಶ್ರೀನಿವಾಸ್ ಪ್ರಭು, ಕಲಾಮಾಧ್ಯಮ ಪರಮೇಶ್ವರ್, ಅಂಕಿತಾ ಗೌಡ, ದತ್ತಾತ್ರೇಯ ಜಮಾದಾರ್ ಮತ್ತು ಮಾವಳ್ಳಿ ಕಾರ್ತಿಕ್ ಸೇರಿದಂತೆ ಬೃಹತ್ ತಾರಾಗಣವಿದೆ.
ಇನ್ನು ತಾಂತ್ರಿಕ ತಂಡದಲ್ಲಿ ಶಿವಶಂಕರ್ ನೂರಂಬಡ ಅವರ ಛಾಯಾಗ್ರಹಣ, ಮಧು ತುಂಬಕೆರೆ ಅವರ ಸಂಕಲನ ಹಾಗೂ ಸಂಗಮೇಶ ವಾಲೆ ಅವರ ವಿಎಫ್ಎಕ್ಸ್ (VFX) ಕಾರ್ಯವಿದೆ.
ನಮ್ಮ ಚಿತ್ರದ ಟೀಸರ್ ನೋಡಿ ಹಂಚಿ ಹರಸಿ. ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದಗಳು