ಟಾಕ್ಸಿಕ್ ಸಿನಿಮಾದ ‘ಮನಮೋಹಕ’ ಹಾಡು ಬಿಡುಗಡೆ
ಬ್ಯಾಕ್ ಟು ಬ್ಯಾಕ್ ಹಿಟ್ ಸಾಂಗ್ಸ್: 'ಟಾಕ್ಸಿಕ್' ಸಿನಿಮಾದ ಎರಡನೇ ಹಾಡು ರಿಲೀಸ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನಪ್ಸ್’ ಸಿನಿಮಾ ಈಗಾಗಲೇ ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತಿದೆ.
ಆಗಸ್ಟ್ 26ಕ್ಕೆ ವಿಶ್ವದಾದ್ಯಂತ ಕನ್ನಡ, ಇಂಗ್ಲೀಷ್ ಸೇರಿದಂತೆ ಬಹುಭಾಷೆಗಳಲ್ಲಿ ಗ್ರ್ಯಾಂಡ್ ಆಗಿ ಬಿಡುಗಡೆಯಾಗಲಿರುವ ಈ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ.
ಇತ್ತೀಚೆಗಷ್ಟೇ ಜುಲೈ 8ರಂದು ಬಿಡುಗಡೆಯಾಗಿದ್ದ ಬೋಲ್ಡ್ ಹಾಗೂ ಮಾಸ್ ‘ತಬಾಹಿ’ ಹಾಡಿಗೆ ಪ್ರೇಕ್ಷಕರಿಂದ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಚಿತ್ರತಂಡ ಈಗ ಎರಡನೇ ಹಾಡನ್ನು ಅಖಾಡಕ್ಕಿಳಿಸಿದ್ದು, ರೊಮ್ಯಾಂಟಿಕ್ ಮೆಲೋಡಿಯಿಂದ ಅಭಿಮಾನಿಗಳ ಮನ ಗೆದ್ದಿದೆ.
ಯಶ್ – ತಾರಾ ಸಜ್ಲಿಂಗ್ ಕೆಮಿಸ್ಟ್ರಿ ಹಾಗೂ ಹಾಡಿನ ವಿಶೇಷತೆ
‘ಮನಮೋಹಕ’ ಎಂದು ಸಾಗುವ ಈ ಪ್ರೇಮಗೀತೆಯಲ್ಲಿ ಯಶ್ ‘ರಾಯ್’ ಪಾತ್ರದಲ್ಲಿ ಅತ್ಯಂತ ಸ್ಟೈಲಿಶ್ ಆಗಿ ಮಿಂಚಿದ್ದರೆ, ಅವರ ಜೊತೆಯಾಗಿ ‘ರೆಬೆಕಾ’ ಪಾತ್ರದಲ್ಲಿ ತಾರಾ ಸುತಾರಿಯಾ ಕಣ್ಣುಕೋರೈಸುವಂತೆ ಕಾಣಿಸಿಕೊಂಡಿದ್ದಾರೆ. ಇಬ್ಬರ ನಡುವಿನ ರೊಮ್ಯಾಂಟಿಕ್ ಕ್ಷಣಗಳು ಹಾಡಿನ ಪ್ರಮುಖ ಆಕರ್ಷಣೆಯಾಗಿವೆ.
ಇನ್ನು ವಿಶೇಷವೆಂದರೆ, ಈ ಹಾಡಿನಲ್ಲಿ ನಯನತಾರಾ ಮತ್ತು ಕಿಯಾರಾ ಅಡ್ವಾಣಿ ಅವರ ಸಣ್ಣ ಝಲಕ್‌ಗಳೂ ಇರುವುದು ಸಿನಿಪ್ರಿಯರ ಕುತೂಹಲವನ್ನು ಇಮ್ಮಡಿಗೊಳಿಸಿದೆ.
ಕನ್ನಡ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಸುಂದರ ಗೀತೆಗೆ ಪ್ರಮೋದ್ ಮರವಂತೆ ಅವರು ಸಾಹಿತ್ಯ ಒದಗಿಸಿದ್ದು, “ಮಿಂಚೊಂದು ಎದೆಯ ತುಂಬಾ, ನಡೆದಾಡಿ ಮರೆಯಾದಂತೆ…” ಎಂಬ ಸಾಲುಗಳು ಸಂಗೀತಪ್ರೇಮಿಗಳ ಮನಗೆದ್ದಿವೆ.
ಸಿದ್ಧಾರ್ಥ್ ಬಸ್ರೂರು ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಒಂದೇ ಹಾಡಿಗೆ ತನಿಷ್ಕ್ ಬಾಗ್ಚಿ, ಅರ್ಸಲಾನ್ ನಿಜಾಮಿ ಹಾಗೂ ಹೀಮಾ ಅಬ್ದುಲ್ಲಾ ಮೂವರು ಜಂಟಿಯಾಗಿ ಅದ್ಭುತವಾಗಿ ಸಂಗೀತ ಸಂಯೋಜಿಸಿರುವುದು ಈ ಹಾಡಿನ ಮತ್ತೊಂದು ವಿಶೇಷತೆಯಾಗಿದೆ.