ಕೆಡಿ ದುನಿಯಾದಲ್ಲಿ ಧ್ರುವ ಭರ್ಜರಿ ಆ್ಯಕ್ಷನ್

0
20260501_005640.jpg

ನಟ ಧ್ರುವ ಸರ್ಜಾ ಭರ್ಜರಿಯಾಗಿ ಆ್ಯಕ್ಷನ್ ದೃಶ್ಯಗಳಲ್ಲಿ ಗಮನಸೆಳೆಯುತ್ತಾರೆ. ಅದ್ದೂರಿ ಪ್ರತಿಭಾ ಪ್ರದರ್ಶನ ಮಾಡಿ, ಬಹುದ್ದೂರ್ ಎಂದು ಸಾಬೀತುಪಡಿಸಿದ್ದಾರೆ.

ರೇಟಿಂಗ್ : 4/5
ಚಿತ್ರ : ಕೆ.ಡಿ – ದಿ ಡೆವಿಲ್
ನಿರ್ಮಾಣ : ಕೆವಿಎನ್ ಪ್ರೊಡಕ್ಷನ್
ನಿರ್ದೇಶನ : ಪ್ರೇಮ್
ತಾರಾಗಣ : ಧ್ರುವ ಸರ್ಜಾ, ರೀಷ್ಮಾ ನಾಣಯ್ಯ,
ಸಂಜಯ್ ದತ್, ರವಿಚಂದ್ರನ್,
ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ, ಯಶ್ ಶೆಟ್ಟಿ

——————————————————————

ಓದು, ಬರಹ ಗೊತ್ತಿಲ್ಲದ ಯುವಕ ಕಾಳಿ (ಧ್ರುವ ಸರ್ಜಾ). ಆತನ ಅಣ್ಣ ಧರ್ಮ (ರಮೇಶ್ ಅರವಿಂದ್) ಸುಶಿಕ್ಷಿತ, ಶಾಲೆಯ ಶಿಕ್ಷಕ. ಹೆಸರಿನಂತೆಯೇ ನಡೆ-ನುಡಿಯಲ್ಲೂ ಧರ್ಮರಾಯನಂತೆ. ಶಾಲೆಯಲ್ಲಿ ಚೆನ್ನಾಗಿ ಓದಲಿಲ್ಲ, ಶಿಕ್ಷಣ ಪಡೆಯಲಿಲ್ಲ ಎಂಬ ಒಂದೇ ಕಾರಣಕ್ಕೆ ಕಾಳಿಯನ್ನು, ಧರ್ಮ ಮಾತನಾಡಿಸದೆ, ಮುಖವೂ ಸಹ ನೋಡದೆ ಇರುತ್ತಾನೆ.

ಒಳಗೆ ಪ್ರೀತಿಯಿದ್ದರೂ, ಹೊರಗಡೆ ತೋರಿಸಿ ಕೊಳ್ಳುವುದಿಲ್ಲ. ಓದು ಇಲ್ಲದಿದ್ದರೇನೂ, ಸೀಮೆಎಣ್ಣೆ ಹಾಕುತ್ತಾ ಜೀವನ ಸಾಗಿಸುವ ಕಾಳಿಗೆ ಅಣ್ಣನೆಂದರೆ ಎಷ್ಟು ಗೌರವವೋ? ಹಾಗೆಯೇ, ಆ ಊರಿನ ಡಾನ್ ಧಕ್ ದೇವ (ಸಂಜಯ್) ಕಂಡರೆ ಭಯ ಭಕ್ತಿ.

ಚಿಕ್ಕವನಿರುವಾಗ ಅಪಘಾತವಾದಾಗ ರಕ್ತ ನೀಡಿ ದೇವ ನನ್ನನ್ನು ಬದುಕುಳಿಸಿದ ಎಂಬ ಒಂದೇ ಕಾರಣಕ್ಕೆ ಕಾಳಿ ಆತನ ಮೇಲೆ ತುಂಬ ಅಭಿಮಾನ ಇಟ್ಟಿರುತ್ತಾನೆ. ಹೀಗಿರುವಾಗ ಕಾಳಿಗೆ ಆ ಊರಿನ ಗಟ್ಟಿಗಿತ್ತಿ ಮಚ್ ಲಕ್ಷ್ಮೀ (ರೀಷ್ಮಾ ನಾಣಯ್ಯ) ಪರಿಚಯವಾಗುತ್ತದೆ.

ಮೊದಲಿಗೆ ಜಗಳ, ಬಳಿಕ ಸಂಧಾನ, ಅನಂತರ ಇಬ್ಬರ ನಡುವೆ ಪ್ರೀತಿ. ಇನ್ನು ಒಂದೆಡೆ ಅಭಿಮಾನದ ಮೂಲಕವೇ ಕಾಳಿ, ಧಕ್ ದೇವನಿಗೆ ಹತ್ತಿರವಾಗುತ್ತಿರುವುದು ಆತನ ಸಹೋದರ ಕವಿಯ (ಯಶ್) ಸಿಟ್ಟಿಗೆ ಕಾರಣವಾಗುತ್ತದೆ.

ಅದಕ್ಕಾಗಿ ಆತನ ಪ್ರೇಯಸಿ ಲಕ್ಷ್ಮೀಯನ್ನು ಅವಮಾನಿಸುತ್ತಾನೆ. ಇದು ಕಾಳಿಯ ಸಿಟ್ಟಿಗೆ ಕಾರಣವಾಗಿ, ಕೊನೆಗೆ ಅಮಾಯಕ ಯುವಕ, ಕಾಳಿ ಅವತಾರ ತಾಳುವಂತೆ ಮಾಡುತ್ತದೆ. ಮುಂದೆ ಕಾಳಿಯ ರುದ್ರವತಾರವೇ ‘ಕೆಡಿ’ ಚಿತ್ರದ ಪ್ರಮುಖ ಹೈಲೈಟ್.

ನಿರ್ದೇಶಕ ಪ್ರೇಮ್ 1970ರ ರೆಟ್ರೋ ಕಥೆಯನ್ನು ಭೂಗತ ಲೋಕದ ಕಥೆಗೆ ಲಿಂಕ್ ಮಾಡಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಪಾತ್ರಗಳ ವಿನ್ಯಾಸ, ಅದ್ದೂರಿ ಸೆಟ್ ಹಾಗೂ ವೇಗ ಕಥೆನಿರೂಪಣೆಯಿಂದ ಪ್ರೇಮ್ ಗಮನಸೆಳೆಯುತ್ತಾರೆ. ಎಲ್ಲಿಯೂ ಬೋರ್ ಆಗದಂತೆ ನೋಡಿಸಿಕೊಂಡು ಹೋಗುತ್ತದೆ. ನಡು ನಡುವೆ ಸೊಗಸಾದ ಹಾಡುಗಳು, ಟೈಮಿಂಗ್ ಕಾಮಿಡಿ ಪ್ರೇಕ್ಷಕರನ್ನು ಇಡೀ ಸಿನಿಮಾ ಹಿಡಿದಿಟ್ಟುಕೊಳ್ಳುತ್ತದೆ.
ಚಿತ್ರದಲ್ಲಿ ಹಾಡಿನ ಮೂಲಕವೇ ಪ್ರೇಕ್ಷಕರನ್ನು ಗೆಲ್ಲುತ್ತೇನೆ ಎಂಬುದನ್ನು ಪ್ರೇಮ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಮೊದಲರ್ಧ ಮನರಂಜನಾತ್ಮಕವಾಗಿ ಕಥೆ ಸಾಗಿದರೆ, ದ್ವಿತೀಯಾರ್ಧದಲ್ಲಿ ಎದುರಾಗುವ ಟರ್ನ್, ಟ್ವಿಸ್ಟ್‌ಗಳು ಪ್ರೇಕ್ಷಕರನ್ನು ಸೀಟಂಚಿನ ತುದಿಯಲ್ಲಿ ಕೂರಿಸುತ್ತವೆ. ನಿರೀಕ್ಷಿತ ಕಥೆಯಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಘಟನೆಗಳೇ ‘ಕೆಡಿ’ ಚಿತ್ರಕ್ಕೆ ಮತ್ತಷ್ಟು ಶೋಭೆ ತಂದಿವೆ. ಇನ್ನು ಹಾಕಲಾದ ಅದ್ದೂರಿ ಸೆಟ್‌ಗಳು 1975ರ ಬೆಂಗಳೂರನ್ನು ಮರುಸೃಷ್ಟಿಸಿವೆ.

ನಟ ಧ್ರುವಸರ್ಜಾ ‘ಭರ್ಜರಿ’ಯಾಗಿ ಆ್ಯಕ್ಷನ್ ದೃಶ್ಯಗಳಲ್ಲಿ ಗಮನಸೆಳೆಯುತ್ತಾರೆ. ಅದ್ದೂರಿ ಪ್ರತಿಭಾ ಪ್ರದರ್ಶನ ಮಾಡಿ, ಬಹುದ್ದೂರ್ ಎಂದು ಸಾಬೀತು ಪಡಿಸಿದ್ದಾರೆ. ಪೊಗರುದಸ್ತ್ ಡೈಲಾಗ್‌ಗಳ ಮೂಲಕ ಧ್ರುವ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ.

ರೀಷ್ಮಾ ನಾಣಯ್ಯ ತಾನೊಬ್ಬ ಪ್ರತಿಭಾನ್ವಿತ ನಟಿ ಎಂಬುದನ್ನು ‘ಕೆಡಿ’ಯಲ್ಲಿ ಸಾಬೀತು ಪಡಿಸಿಕೊಂಡಿದ್ದಾರೆ. ನಟಿಯ ಖಡಕ್ ಡೈಲಾಗ್‌ಗಳು, ಮಚ್ಚಿನಂತೆ ಹರಿತವಾಗಿವೆ. ಸಂಜಯ್ ದತ್, ರಮೇಶ್ ಅರವಿಂದ್, ರವಿಚಂದ್ರನ್, ಶಿಲ್ಪಾ ಶೆಟ್ಟಿ ಪಾತ್ರಗಳಿಗೆ ಒತ್ತು ಸಿಕ್ಕಿದೆ. ಇನ್ನು ಸುದೀಪ್ ಅತಿಥಿ ಪಾತ್ರ ಸ್ವಲ್ಪ ಸಮಯ ಇದ್ದರೂ, ಇಡೀ ಕಥೆಗೆ ಟ್ವಿಸ್ಟ್ ತರುತ್ತದೆ.

ಈಗಾಗಲೇ ಪ್ರೇಮ್ ಹೇಳಿದಂತೆ ಈ ಚಿತ್ರ ಟ್ರೇಲರ್‌ನಂತಿದ್ದು, ಪಿಕ್ಚರ್ ಅಭೀ ಬಾಕಿ ಹೈ ಎಂಬಂತೆ ಮುಂದಿನ ಕಥೆಯನ್ನು ‘ಕೆಡಿ 2’ನಲ್ಲಿ ನಿರೀಕ್ಷಿಸಬಹುದಾಗಿದೆ.

ಅರ್ಜುನ್ ಜನ್ಯ ಸಂಗೀತ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ವಿಲಿಯಂ ಡೇವಿಡ್ ಕ್ಯಾಮರಾದಲ್ಲಿ ಆ್ಯಕ್ಷನ್ ದೃಶ್ಯಗಳನ್ನು ಅದ್ದೂರಿಯಾಗಿ ಸೆರೆಹಿಡಿದಿದ್ದಾರೆ. ಅಣ್ಣ-ತಮ್ಮಂದಿರ ಕಥೆಯಲ್ಲಿ ಆ್ಯಕ್ಷನ್ ಅಬ್ಬರ ಕಣ್ತುಂಬಿಕೊಳ್ಳಲು ‘ಕೆಡಿ’ಯನ್ನು ತಪ್ಪದೇ ನೋಡಿ.

Share

Leave a Reply

Your email address will not be published. Required fields are marked *