ಟಾಕ್ಸಿಕ್ ಟ್ರೇಲರ್‌ ಧಮಾಕ: ರಾಯ – ಟಿಕೆಟ್ ನಡುವೆ ಭೀಕರ ಯುದ್ಧ

0
20260809_084906

ರಕ್ತಸಿಕ್ತ ಆ್ಯಕ್ಷನ್, 'ತ್ರಿಬಲ್' ಅವತಾರ: ಆಗಸ್ಟ್ 26ಕ್ಕೆ ತೆರೆಗೆ ಬರಲು 'ಟಾಕ್ಸಿಕ್' ರೆಡಿ

ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನಪ್ಸ್’ ಸಿನಿಮಾದ ಆಫಿಷಿಯಲ್ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಬೆಂಗಳೂರಿನ ಗಾಂಧಿನಗರದಲ್ಲಿರುವ ಖಾಸಗಿ ಮಾಲ್‌ನಲ್ಲಿ ಶನಿವಾರ ಸಂಜೆ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರು ಕನ್ನಡ ಸೇರಿದಂತೆ ಐದು ಭಾಷೆಗಳ ಟ್ರೇಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಯಶ್ ತ್ರಿಬಲ್ ಅವತಾರ: 4.38 ನಿಮಿಷದ ಈ ದೀರ್ಘಾವಧಿ ಟ್ರೇಲರ್‌ನಲ್ಲಿ ಯಶ್ ಮೂರು ಭಿನ್ನ ಗೆಟಪ್‌ಗಳಲ್ಲಿ ಮಿಂಚಿದ್ದಾರೆ. ಹೈ-ವೋಲ್ಟೇಜ್ ಆ್ಯಕ್ಷನ್, ಪ್ರೀತಿ, ದ್ವೇಷ ಹಾಗೂ ಅಧಿಕಾರದ ಹಸಿವಿನ ಸನ್ನಿವೇಶಗಳು ರೋಮಾಂಚನಗೊಳಿಸುತ್ತವೆ.

ಶಕ್ತಿಶಾಲಿ ಮಹಿಳಾ ಪಾತ್ರಗಳು: ಕೇವಲ ಗ್ಲಾಮರ್‌ಗೆ ಸೀಮಿತವಾಗದೆ, ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಹಾಗೂ ಹುಮಾ ಖುರೇಷಿ ಶಕ್ತಿಶಾಲಿ ಹಾಗೂ ಪ್ರತೀಕಾರದ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ.

ಗಮನಸೆಳೆದ ಡೈಲಾಗ್: ಮುಖವಾಡದಿಂದ ಮುಖದ ಮೇಲಿನ ದುಃಖ ಬೇಕಾದ್ರೂ ಮುಚ್ಚಿಡಬಹುದು, ಹಣೆ ಮೇಲೆ ಬರೆದಿರುವ ದುರಂತನ್ನಲ್ಲ” ಎಂಬ ಕಿಯಾರಾ ಅಡ್ವಾಣಿ ಮಾತುಗಳು ವೈರಲ್ ಆಗುತ್ತಿವೆ.

ಬಿಡುಗಡೆ ದಿನಾಂಕ: ಅದ್ಧೂರಿ ಮೇಕಿಂಗ್ ಮತ್ತು ಶ್ರೀಮಂತ ತಾಂತ್ರಿಕತೆಯಿಂದ ಕೂಡಿರುವ ಈ ಚಿತ್ರ ಆಗಸ್ಟ್ 26ಕ್ಕೆ ವಿಶ್ವದಾದ್ಯಂತ ತೆರೆಕಾಣಲಿದೆ.

ರಾಯ ಮತ್ತು ಟಿಕೆಟ್ ನಡುವಿನ ರಿವೇಂಜ್ ಸ್ಟೋರಿ

ಸಿನಿಮಾದ ಬಹುತೇಕ ದೃಶ್ಯಗಳು ‘ರಾಯಲ್ ಸರ್ಕಸ್ ಕ್ಯಾಂಪ್’ ಸುತ್ತಲೇ ಸಾಗಲಿದ್ದು, ಇದೇ ಕಥೆಯ ಕೇಂದ್ರಬಿಂದುವಾಗಿದೆ. ಯಶ್ ಈಗಾಗಲೇ ತಿಳಿಸಿದಂತೆ ಇದು ತಂದೆ-ಮಗನ ರಿವೇಂಜ್ ಕಥೆಯಾಗಿದ್ದು, ‘ರಾಯ’ ಮತ್ತು ‘ಟಿಕೆಟ್’ ನಡುವಿನ ಕಾದಾಟವನ್ನು ಟ್ರೇಲರ್‌ನಲ್ಲಿ ರಕ್ತಸಿಕ್ತವಾಗಿ ತೋರಿಸಲಾಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕಿ ಗೀತು ಮೋಹನ್‌ದಾಸ್, ಚಿತ್ರಕ್ಕೆ ಯಶ್ ನೀಡಿದ ಬೆಂಬಲವನ್ನು ನೆನೆದು ಭಾವುಕರಾದರು.

ಕನ್ನಡಿಗರು ತಲೆಎತ್ತಿ ಹೆಮ್ಮೆಪಡುವ ಸಿನಿಮಾ: ರಾಕಿಂಗ್ ಸ್ಟಾರ್ ಯಶ್

ಕಾರ್ಯಕ್ರಮದಲ್ಲಿ ‘ಕರ್ನಾಟಕಕ್ಕೆ ಸ್ವಾಗತ, ಸುಸ್ವಾಗತ’ ಎಂದು ಮಾತು ಆರಂಭಿಸಿದ ಯಶ್:“ಈ ವೇದಿಕೆ ಮೇಲೆ ನಾನು ನಿಲ್ಲಲು ಕರ್ನಾಟಕದ ಜನತೆಯೇ ಪ್ರಮುಖ ಕಾರಣ. ಅವರು ನೀಡಿದ ಶಕ್ತಿ ಮತ್ತು ಗೆಲುವೇ ನಾನು ಇಷ್ಟು ದೊಡ್ಡ ಹೆಜ್ಜೆ ಇಡಲು ಸ್ಪೂರ್ತಿ. ಹಳೆಯ ಗೆಲುವಿನ ಪ್ರತೀಕವೇ ಈ ‘ಟಾಕ್ಸಿಕ್’. ದಾರಿ ಯಾವುದೇ ಇರಲಿ, ಹೋರಾಟ ಮಾಡಿ ಗುರಿ ತಲುಪಬೇಕು.

ಇಂದಿನ ಜಮಾನದ ಗೊಂದಲಗಳನ್ನು ಈ ಸಿನಿಮಾ ಪ್ರತಿನಿಧಿಸುತ್ತದೆ. ಪ್ರತಿಯೊಬ್ಬ ಕನ್ನಡಿಗನೂ ತಲೆಎತ್ತಿ ಹೆಮ್ಮೆಪಡುವಂತೆ ಈ ಸಿನಿಮಾ ಮೂಡಿಬಂದಿದೆ. ಕಳೆದ ಎರಡು ವರ್ಷಗಳ ಹಿಂದೆ ಆ.8ರಂದು ಮುಹೂರ್ತ ಕಂಡಿದ್ದ ಈ ಚಿತ್ರವನ್ನು 200 ದಿನಗಳ ಕಾಲ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ಚಿತ್ರೀಕರಿಸಿದ್ದೇವೆ.”ಎಂದರು.

Share

Leave a Reply

Your email address will not be published. Required fields are marked *