ಕ್ರಾಸಿಂಗ್ ಪಾತ್ಸ್: ಸಂಯುಕ್ತಾ ಹೊರನಾಡು ನಿರ್ದೇಶನದ ಸಾಕ್ಷ್ಯಚಿತ್ರ ಅನಾವರಣ

0
20260812_213151.jpg

ಆಗಸ್ಟ್ 12ರ ‘ವಿಶ್ವ ಆನೆಗಳ ದಿನ’ದಂದು ಅನಾವರಣಗೊಳ್ಳುತ್ತಿರುವ ‘ಕ್ರಾಸಿಂಗ್ ಪಾತ್ಸ್’ ಸಾಕ್ಷ್ಯಚಿತ್ರದ ಮೂಲಕ ನಟಿ ಸಂಯುಕ್ತಾ ಹೊರನಾಡು ಅವರು ಪ್ರಥಮ ಬಾರಿಗೆ ನಿರ್ದೇಶಕಿಯಾಗಿ ಚಿತ್ರರಂಗದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಪ್ರಸ್ತುತ ದಿನಗಳಲ್ಲಿ ತೀವ್ರಗೊಳ್ಳುತ್ತಿರುವ ಮಾನವ ಹಾಗೂ ಆನೆಗಳ ನಡುವಿನ ಸಂಘರ್ಷದ ಗಂಭೀರತೆಯನ್ನು ಈ ಸಾಕ್ಷ್ಯಚಿತ್ರವು ಪ್ರೇಕ್ಷಕರ ಮುಂದೆ ತೆರೆದಿಡುತ್ತದೆ.
ಟೆಕಿಯಾನ್ (Tekion) ಸಂಸ್ಥೆಯ ಸಿಎಸ್‌ಆರ್ ಇನಿಶಿಯೇಟಿವ್, ಕರ್ನಾಟಕ ಅರಣ್ಯ ಇಲಾಖೆ, ‘ಆ ರೋಚಾ ಇಂಡಿಯಾ‘ ಹಾಗೂ ಸಂಪಿಗೆ ಫಿಲ್ಮ್ಸ್ ಪ್ರೊಡಕ್ಷನ್ ಜಂಟಿಯಾಗಿ ಈ ಯೋಜನೆಯಲ್ಲಿ ಕೈಜೋಡಿಸಿವೆ.

ಕಾಡುಗಳು ಕಿರಿದಾಗುತ್ತಾ, ಮಾನವನ ಆಕ್ರಮಣದಿಂದ ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನಗಳು ನಾಶವಾಗುತ್ತಿರುವ ಈ ಸಂದರ್ಭದಲ್ಲಿ, ಆಹಾರ ಮತ್ತು ಜಾಗಕ್ಕಾಗಿ ಆನೆಗಳು ಮಾನವ ವಸತಿ ಪ್ರದೇಶಗಳಿಗೆ ಬರುವುದು ಅನಿವಾರ್ಯವಾಗಿದೆ.

ಇದು ಸ್ಥಳೀಯ ಸಮುದಾಯಗಳು ಹಾಗೂ ಆನೆಗಳೆರಡರ ಮೇಲೆಯೂ ಗಂಭೀರ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ‘ಕ್ರಾಸಿಂಗ್ ಪಾತ್ಸ್’ ಚಿತ್ರವು ಸಂಘರ್ಷದ ತೀವ್ರತೆಯನ್ನು ವಿಶ್ಲೇಷಿಸುವುದರ ಜೊತೆಗೆ, ಪ್ರಕೃತಿ ಮತ್ತು ಮಾನವನ ನಡುವೆ ಇರಬೇಕಾದ ಶಾಂತಿಯುತ ಸಹಬಾಳ್ವೆಯ ಸುಸ್ಥಿರ ಮಾರ್ಗಗಳನ್ನು ಹುಡುಕುವ ಪ್ರಯತ್ನ ಮಾಡಿದೆ.

ವಿಶೇಷವಾಗಿ, ‘ಆ ರೋಚಾ ಇಂಡಿಯಾ’ ಸಂಸ್ಥೆಯು ಕರ್ನಾಟಕ ಅರಣ್ಯ ಇಲಾಖೆಯೊಂದಿಗೆ ಸೇರಿ ನಡೆಸುತ್ತಿರುವ ‘ಪ್ರಾಜೆಕ್ಟ್ ಇಎಡಿಡಿಎಸ್’ (ಆನೆಗಳ ಉಪಟಳ ತಡೆಯುವ ಶ್ವಾನ ದಳ) ಯೋಜನೆಯ ಕಾರ್ಯವೈಖರಿಯನ್ನು ಈ ಸಾಕ್ಷ್ಯಚಿತ್ರದಲ್ಲಿ ಚಿತ್ರಿಸಲಾಗಿದೆ.
‘ಆ ರೋಚಾ ಇಂಡಿಯಾ’ದ ಅವಿನಾಶ್ ಕೃಷ್ಣನ್ ಅವರು ಈ ಕಾರ್ಯಕ್ರಮವನ್ನು ಮುನ್ನಡೆಸುತ್ತಿದ್ದಾರೆ. ಇನ್ನು ‘ಗಂಧದ ಗುಡಿ’ ಹಾಗೂ ‘777 ಚಾರ್ಲಿ’ ಖ್ಯಾತಿಯ ಪ್ರತೀಕ್ ಶೆಟ್ಟಿ ಅವರ ಕ್ಯಾಮೆರಾ ಕೈಚಳಕ ಈ ಚಿತ್ರಕ್ಕಿದೆ.

ಈ ಮಹತ್ವದ ಯೋಜನೆಗೆ ಕರ್ನಾಟಕ ಸರ್ಕಾರದ ಅರಣ್ಯ ಹಾಗೂ ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ, ಪಿಸಿಎಫ್‌ಸಿ (PCCF) ಪುಷ್ಕರ್ ಕುಮಾರ್, ಪ್ರಾಜೆಕ್ಟ್ ಎಲಿಫೆಂಟ್ ಯೋಜನಾ ಮುಖ್ಯಸ್ಥ ಮನೋಜ್ ರಾಜನ್, ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಸೌರಭ್ ಕುಮಾರ್ ಹಾಗೂ ಆ ರೋಚಾ ಇಂಡಿಯಾದ ರಾಷ್ಟ್ರೀಯ ನಿರ್ದೇಶಕ ಅವಿನಾಶ್ ಕೃಷ್ಣನ್ ಅವರು ಸಾಥ್ ನೀಡಿದ್ದಾರೆ.
ಪರಿಸರ ನಾಶ ಹಾಗೂ ಹವಾಮಾನ ವೈಪರೀತ್ಯ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ, ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಹಬಾಳ್ವೆಯ ಅಗತ್ಯವನ್ನು ಸಾರಲು ‘ಕ್ರಾಸಿಂಗ್ ಪಾತ್ಸ್’ ಸಾಕ್ಷ್ಯಚಿತ್ರ ಮುಂದಾಗಿದೆ.

Share

Leave a Reply

Your email address will not be published. Required fields are marked *