‘ಸೆಲೆಬ್ರಿಟಿ’ ಚಿತ್ರದ ಭಾವನಾತ್ಮಕ ‘ಮದರ್ ಸಾಂಗ್’ ರಿಲೀಸ್
ಅಶ್ವಿನ್ ನಾಯಕನಾಗಿ ಅಭಿನಯಿಸುತ್ತಿರುವ ಬಹುನಿರೀಕ್ಷಿತ ‘ಸೆಲೆಬ್ರಿಟಿ’ ಚಿತ್ರದ ತಾಯಿ-ಮಗನ ಬಾಂಧವ್ಯ ಸಾರುವ ವಿಶೇಷ ಹಾಡು ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ನಟ ಹಾಗೂ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಈ ಹಾಡನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಕಿರಣ್ ವಿಶ್ವನಾಥ್ ನಿರ್ದೇಶನದ ಈ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ನಾಯಕ ಅಶ್ವಿನ್ ಹಾಗೂ ಹಿರಿಯ ನಟಿ ಸಂಗೀತಾ ಮಾಧವನ್ ಪಾಲ್ಗೊಂಡು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಈ ವೇಳೆ ಮಾತನಾಡಿದ ನಟ ಅಶ್ವಿನ್, “ತಾಯಂದಿರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಮಾಡುವ ತ್ಯಾಗ ಮತ್ತು ನೀಡುವ ಬೆಂಬಲವೇ ಈ ಚಿತ್ರದ ಜೀವಾಳ. ಈ ಹಾಡು ಕೇಳುವ ಪ್ರತಿಯೊಬ್ಬರಿಗೂ ತಮ್ಮ ತಾಯಿಯ ನೆನಪಾಗುವುದು ಖಂಡಿತ. ಸಿನಿಮಾದ ಟೀಸರ್ ಇಷ್ಟಪಟ್ಟು ನಮಗೆ ಬೆಂಬಲವಾಗಿ ನಿಂತು ಹಾಡು ಬಿಡುಗಡೆ ಮಾಡಿಕೊಟ್ಟ ನಿಖಿಲ್ ಕುಮಾರಸ್ವಾಮಿ ಅವರಿಗೆ ಧನ್ಯವಾದಗಳು” ಎಂದರು.
ಮುಂದುವರಿದು, ರಜನಿಕಾಂತ್ ಮತ್ತು ಮೋಹನ್ಲಾಲ್ ಅವರಂತಹ ದಿಗ್ಗಜರ ಜೊತೆ ನಟಿಸಿರುವ ಸಂಗೀತಾ ಮಾಧವನ್ ಅವರು ಈ ಸಿನಿಮಾದಲ್ಲಿ ಅಭಿನಯಿಸಿರುವುದು ಚಿತ್ರದ ತೂಕ ಹೆಚ್ಚಿಸಿದೆ ಎಂದರು. ಅಲ್ಲದೆ, “ಇನ್ನು ಎರಡು ಸಾಹಸ ದೃಶ್ಯಗಳು ಹಾಗೂ ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರು ಅಭಿನಯಿಸಲಿರುವ ವಿಶೇಷ ಗೀತೆಯ ಶೂಟಿಂಗ್ ಬಾಕಿಯಿದ್ದು, ಡಿಸೆಂಬರ್ನಲ್ಲಿ ಸಿನಿಮಾ ತೆರೆಗೆ ತರಲು ಯೋಜಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಇನ್ನು ಚಿತ್ರದಲ್ಲಿ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಸಂಗೀತಾ ಮಾಧವನ್ ಮಾತನಾಡಿ, “ನಿರ್ದೇಶಕ ಕಿರಣ್ ಮತ್ತು ಮನೋಜ್ ಕೃಷ್ಣ ಕಥೆ ಹೇಳಿದ ತಕ್ಷಣವೇ ನನಗೆ ತುಂಬಾ ಇಷ್ಟವಾಯಿತು. ನಂತರ ಈ ತಾಯಿಯ ಹಾಡು ಕೇಳಿದಾಗ ಅದರ ತಾಂತ್ರಿಕ ಮೆರುಗು ಮತ್ತು ಭಾವನೆಗಳಿಗೆ ಮಾರುಹೋದೆ. ಈ ಸಿನಿಮಾವನ್ನು ಒಪ್ಪಿಕೊಂಡದ್ದು ನನ್ನ ಅಭಿನಯ ಪಯಣದ ಅತ್ಯುತ್ತಮ ನಿರ್ಧಾರಗಳಲ್ಲಿ ಒಂದು” ಎಂದು ಸಂತಸ ವ್ಯಕ್ತಪಡಿಸಿದರು.
ಸಾ ರಾ ಮಹೇಶ್ ಹಾಗೂ ಸುಷ್ಮಾ ಅಶ್ವಿನ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಭಾವನಾತ್ಮಕ ಚಿತ್ರದಲ್ಲಿ ಅಶ್ವಿನ್, ಪ್ರಿಯಾಂಕಾ ಆಚಾರ್ ಮತ್ತು ಸಂಗೀತಾ ಮಾಧವನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಆನಂದ್ ಮೀನಾಕ್ಷಿ ಅವರ ಛಾಯಾಗ್ರಹಣ, ಪ್ರವೀಣ್ ಕೆ ಗೌಡ ಅವರ ಸಂಕಲನ, ಗುಣ ಅವರ ಕಲಾ ನಿರ್ದೇಶನ ಹಾಗೂ ಮನೋಜ್ ಕೃಷ್ಣ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.