“ಮಗ್ಗಿಪುಸ್ತಕ” ಫೆಬ್ರವರಿ 13 ರಂದು ಬಿಡುಗಡೆ
ಚಿನ್ನಸ್ವಾಮಿ ಫಿಲಂಸ್ ಬ್ಯಾನರ್ ಅಡಿ ಸಿ ಯತಿರಾಜ್ ಹಾಗೂ ಸ್ನೇಹಿತರ ಜತೆಸೇರಿ ನಿರ್ಮಿಸಿರುವ “ಮಗ್ಗಿಪುಸ್ತಕ” ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು. 20ಕ್ಕೂ ಹೆಚ್ಚು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಹರಿವರಾಸನಂ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರ ಇದೇ 13ರಂದು ರಾಜ್ಯಾದ್ಯಂತ ತೆರೆಕಾಣಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಹರಿವರಾಸನಂ, “ಕೋವಿಡ್ ಟೈಮಲ್ಲಿ ನಾನು ಬರೆದ ಅವನಿ ಎಂಬ ಕಾದಂಬರಿಯನ್ನು ಆಧರಿಸಿ ಮಾಡಿದ ಚಿತ್ರವಿದ್ದು, ಇದು ನಾಲ್ಕು ಆಯಾಮಗಳಲ್ಲಿ ನಡೆಯುವ ಹೈಪರ್ ಲಿಂಕ್ ಚಿತ್ರ. ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಮಗ್ಗಿ ಪುಸ್ತಕ ಮಕ್ಕಳ ಚಿತ್ರವಲ್ಲ, ಬದುಕಿನ ಲೆಕ್ಕಾಚಾರ, ನಮ್ಮ ಜೀವನವೇ ಒಂದು ಮಗ್ಗಿಪುಸ್ತಕ ಇದ್ದಂತೆ, ಇದರಲ್ಲಿ ಒಳ್ಳೆದನ್ನು ಕೂಡಬೇಕು, ಕೆಟ್ಟದ್ದನ್ನು ಕಳೆಯಬೇಕು, ಜ್ಞಾನವನ್ನು ಗುಣಿಸಬೇಕು, ಅಜ್ಞಾನವನ್ನು ಭಾಗಿಸಬೇಕು ಎಂದು ಹೇಳಿದ್ದೇನೆ“.

ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ರಕ್ಷಾಗೌಡ ಮಾತನಾಡುತ್ತ “ಈಗಾಗಲೇ ರಾಧಾರಮಣ, ಪುಟ್ಮಲ್ಲಿ ಸೀರಿಯಲ್ಗಳಲ್ಲಿ ಅಭಿನಯಿಸಿದ್ದೆ, ಈ ಚಿತ್ರದಲ್ಲಿ ತಾಯಿಯಾಗಿ ನಟಿಸಿದ್ದೇನೆ. ತಾಯಿಯ ಪಾತ್ರ ಅನ್ನೋದಕ್ಕಿಂತ ಚಾಲೆಂಜಿಂಗ್ ಪಾತ್ರ ಅದಾಗಿತ್ತು” ಎಂದು ಹೇಳಿದರು.
ಕೃಷ್ಣ ಮಹೇಶ್ ಮಾತನಾಡುತ್ತ.. “ಇದರಲ್ಲಿ ನಾನು ನೆಗೆಟಿವ್ ಪಾತ್ರ ಮಾಡಿದ್ದೇನೆ, ಹರಿ ಈ ಸಿನಿಮಾ ಮಾಡಲು ತುಂಬಾ ಕಷ್ಟಪಟ್ಟಿದ್ದಾರೆ, ಇದೊಂದು ಬ್ರಿಡ್ಜ್ ಸಿನಿಮಾ. ನಾಲ್ಕು ವೇನಲ್ಲಿ ಸಾಗುವ ಚಿತ್ರದ ಕಥೆ ಕ್ಲೈಮ್ಯಾಕ್ಸ್ ನಲ್ಲಿ ಒಂದೆಡೆ ಸೇರುತ್ತದೆ“, ಎಂದು ಹೇಳಿದರು,
ಚಿತ್ರದಲ್ಲಿ ದಡ್ಡ ಪ್ರವೀಣ್ ಖ್ಯಾತಿಯ ರಂಜಿತ್ ಕಾಸರಗೋಡು, ವರ್ಧನ್ ತೀರ್ಥಳ್ಳಿ, ರಾನ್ವಿ ಶೇಖರ್ ಸೇರಿದಂತೆ ಹೆಸರಾಂತ ಕಲಾವಿದೆರು ನಟಿಸಿದ್ದಾರೆ.
ಬೆಂಗಳೂರು, ಮೈಸೂರು, ಮಂಗಳೂರು, ನಂಜನಗೂಡು, ಶ್ರೀರಂಗಪಟ್ಟಣ, ಹೆಚ್.ಡಿ.ಕೋಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದ್ದು. ಒಟ್ಟು ಚಿತ್ರದಲ್ಲಿ 7 ಹಾಡುಗಳಿದ್ದು, 17 ಜನ ಸಿಂಗರ್ಸ್ ಹಾಡಿದ್ದಾರೆ. ಎಸ್.ಎಸ್. ನಾಚಪ್ಪ ಅವರ ಸಂಗೀತ ಸಂಯೋಜನೆಯಿದೆ.