ಶಿಲ್ಪಾ ಶ್ರೀನಿವಾಸ್ ಚಿತ್ರಕ್ಕೆ “ಶಿಲ್ಪಾ ಶ್ರೀನಿವಾಸ್” ಹೀರೋ
Shilpa Srinivas Movie
ಕನ್ನಡದಲ್ಲಿ ವಿಭಿನ್ನ ಕಥೆಯುಳ್ಳ ಚಿತ್ರಗಳು ಬರುತ್ತಿವೆ. ಇದೀಗ ನಿರ್ದೇಶಕ ಆರ್ ಕೆ ಗಾಂಧಿ ಚಿತ್ರರಂಗಕ್ಕೆ ಸಂಬಂದಿಸಿದ ವಿಭಿನ್ನ ರೀತಿಯ ಕಥೆಯನ್ನು ಹೇಳಲು ಮುಂದಾಗಿದ್ದಾರೆ. ಈಗಾಗಲೇ ಎರಡು ಚಿತ್ರಗಳ ನಿರ್ದೇಶನ ಮಾಡಿರುವ ಆರ್ ಕೆ ಗಾಂಧಿ ಅವರಿಗೆ ಟಾಲಿವುಡ್‌ನ ನಂಟು ಇದ್ದು, ಅವರ ಚಿತ್ರಗಳು ತೆಲುಗಿನಲ್ಲೂ ಸಹ ಬಿಡುಗಡೆ ಆಗಿವೆ. ಪ್ರೇಮ ಕಥೆ ಇರುವ “ಮುಗಿಲ ಮಲ್ಲಿಗೆ” ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಈ ಮಧ್ಯೆ ಹೊಸ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲು ಆರ್ ಕೆ ಗಾಂಧಿ ಅವರು ಸಜ್ಜಾಗಿದ್ದಾರೆ.
ಅಂದಹಾಗೇ ಹೊಸ ಚಿತ್ರಕ್ಕೆ “ಶಿಲ್ಪಾ ಶ್ರೀನಿವಾಸ್” ಎಂದು ಹೆಸರಿಡಲಾಗಿದೆ. ಚಿತ್ರದ ವಿಶೇಷವೆಂದರೆ ಖ್ಯಾತ ನಿರ್ಮಾಪಕರೂ ವಿತರಕರು ಹಾಗೂ ಪ್ರಸ್ತುತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರೂ ಆಗಿರುವ “ಶಿಲ್ಪಾ ಶ್ರೀನಿವಾಸ್” ಅವರು ಚಿತ್ರದ ನಾಯಕನಾಗಿ “ನಿರ್ದೇಶಕನ” ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದ ಬಗ್ಗೆ ನಿರ್ದೇಶಕರು ಸುದ್ದಿನೋಟದೊಂದಿಗೆ ಮಾತನಾಡಿ “ಕಲೆ ಎಲ್ಲರನ್ನು ಕೈ ಬೀಸಿ ಕರೆಯುತ್ತದೆ, ಆದರೆ ಕೆಲವರನ್ನು ಮಾತ್ರ ಆಯ್ದುಕೊಳ್ಳುತ್ತದೆ. ಒಂದಷ್ಟು ಜನ ಸಿನಿಮಾ ರಂಗವನ್ನು ತನ್ನ ತಾಯಿ ಎಂದು ಭಾವಿಸುತ್ತಾ.. ಕಲಾಮಾತೆ ಎಂದು ಆರಾಧಿಸುತ್ತಾರೆ. ಕೆಲವರು ಸಿನಿಮಾ ರಂಗಕ್ಕೆ ಶೋಕಿಗಾಗಿ ಎಂಟ್ರಿ ಕೊಡುತ್ತಾರೆ. ಇಂಥವರಿಂದ ಸಿನಿಮಾ ರಂಗ ಅಧೋಗತಿಗೆ ಇಳಿಯುತ್ತಿದೆ.. ಇದನ್ನು ಮಟ್ಟ ಹಾಕಲು ಕಲಾಮಾತೆಯ ನಿಜವಾದ ಆರಾಧಕ ಏನೆಲ್ಲಾ ಮಾಡುತ್ತಾನೆ“ ಎಂಬುದೇ ಚಿತ್ರದ ಒಂದು ಲೈನ್ ಸ್ಟೋರಿ ಎಂದರು.

ಚಿತ್ರದ ಚಿತ್ರೀಕರಣವು ಇದೇ ತಿಂಗಳು ಜುಲೈ 14 ರಂದು ಪ್ರಾರಂಭವಾಗುತ್ತಿದ್ದು, ಬೆಂಗಳೂರು, ಚಿಕ್ಕಬಳ್ಳಾಪುರ ಹಾಗೂ ಹೊಸಕೋಟೆಯ ಸುತ್ತಮುತ್ತ ಸ್ಥಳಗಳಲ್ಲಿ ಎರಡು ಹಂತದಲ್ಲಿ ಚಿತ್ರೀಕರಣ ನಡೆಸುವುದಾಗಿ ಚಿತ್ರತಂಡ ತಿಳಿಸಿದೆ. “ಶಿಲ್ಪಾ ಶ್ರೀನಿವಾಸ್”ಗೆ ಅನಿರುದ್ಧ ಶಾಸ್ತ್ರಿ ಸಂಗೀತ, ಪ್ರತಾಪ್ ಭಟ್ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ, ಪ್ರಮೋದ್ ಭಾರತೀಯ ಛಾಯಾಗ್ರಹಣ.ವಿನಯ್ ಜಿ ಆಲೂರ ಸಂಕಲನ ಚಿತ್ರಕ್ಕಿದೆ.
ಶಿಲ್ಪಾ ಶ್ರೀನಿವಾಸ್ ಜೊತೆ ಪ್ರಮುಖ ಪಾತ್ರಗಳಲ್ಲಿ ಕಿಶೋರ್ ಕಾಸರಗೋಡು,ಸ್ವಾತಿ ಲಿಂಗರಾಜ್, ಪ್ರಿಯಾಂಕ, ಶೋಭರಾಜ್, ಸಿ.ಟಿ.ಜಯರಾಮ್, ಹೊಸಕೋಟೆ ಶಿವಕುಮಾರ್, ಲೋಕೇಶ್ ನಟಿಸುತ್ತಿದ್ದಾರೆ.
