ಜೈ ಗದಾ ಕೇಸರಿ ಟೀಸರ್ ಮತ್ತು ಹಾಡುಗಳ ಬಿಡುಗಡೆ
ಬಿ.ಬಿ.ಮೂವೀ ಕ್ರಿಯೇಶನ್ಸ್ ಅಡಿಯಲ್ಲಿ ಕೊಪ್ಪಳ ಮೂಲದ ಉದ್ಯಮಿ ಬಸವರಾಜ್ ಭಜಂತ್ರಿ ನಿರ್ಮಾಣ ಮಾಡಿರುವ ಜೈ ಗದಾ ಕೇಸರಿ ಚಿತ್ರದ ಟೀಸರ್ ಮತ್ತು ಹಾಡುಗಳ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು.
ಯತೀಶ್‌ಕುಮಾರ್.ವಿ ಮತ್ತು ಮಂಜು ಹೊಸಪೇಟೆ ಜಂಟಿಯಾಗಿ ಸಿನಿಮಾಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ನಾಯಕರುಗಳಾಗಿ ರಾಜ್‌ಚರಣ್ ಬ್ರಹ್ಮಾವರ್ ಮತ್ತು ಈಶ್ವರನಾಯಕ. ಈ ಪೈಕಿ ಈಶ್ವರನಾಯಕ ಸಹ ನಿಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಜೀವಿತಾ ವಸಿಷ್ಠ ನಾಯಕಿ. ಕೋಮಲ್ ದೇವಕರ್ ಎರಡನೇ ನಾಯಕಿಯಾಗಿ ಹಾಗೂ ಹಿರಿಯ ಕಲಾವಿದರುಗಳಾದ ಅವಿನಾಶ್, ಹೊನ್ನವಳ್ಳಿ ಕೃಷ್ಣ, ಧರ್ಮ, ಅರವಿಂದರಾವ್, ಜಯರಾಮ್, ಪ್ರಶಾಂತ್ ಸಿದ್ದಿ, ಲಕ್ಷಣದಾಸ್, ವರುಣ್, ರಮೇಶ್(ಬಿಲ್ಲಾ) ಮುಂತಾದವರು ನಟಿಸಿದ್ದಾರೆ.
ಪುರಾಣದಲ್ಲಿ ರಾಮ ಮತ್ತು ಹನುಮಾನ್ ಬಗ್ಗೆ ಸಾಕಷ್ಟು ವಿಷಯಗಳು ಇರಲಿದೆ. ಅದೇ ರೀತಿ ಸಿನಿಮಾದಲ್ಲಿ ಆಂಜನೇಯನ ಗದೆಗೆ ಪ್ರಾಮುಖ್ಯತೆ ನೀಡಲಾಗಿ, ಇದರ ಸುತ್ತ ಸನ್ನಿವೇಶಗಳು ಸಾಗುತ್ತದೆ. ಊರಿನಲ್ಲಿ ದೇವಸ್ಥಾನದಲ್ಲಿರುವ ಗದೆಯನ್ನು ಆಕ್ರಮಣ ಮಾಡಲು ಕಳ್ಳರು ಬಂದಾಗ, ಅದನ್ನು ರಕ್ಷಣೆ ಮಾಡಲು ಇಬ್ಬರು ಹುಡುಗರು ಮುಂದಾಗುತ್ತಾರೆ. ಆ ನಂತರ ಯಾವ ರೀತಿಯ ಬೆಳವಣಿಗೆಗಳು ಆಗುತ್ತದೆ. ಅದೆಲ್ಲಾವನ್ನು ಎದುರಿಸಿ ಹೇಗೆ ಸಫಲರಾಗುತ್ತಾರೆ ಎಂಬುದು ಒಂದು ಲೈನ್ ಸ್ಟೋರಿ.
ಕಾರ್ತಿಕ್‌ವೆಂಕಟೇಶ್ ಮೂರು, ಪ್ರಸನ್ನ ಬೋಜಶೆಟ್ಟರ್ ಶೀರ್ಷಿಕೆ ಗೀತೆ ಹಾಗೂ ಜಾರ್ಜ್ಥಾಮಸ್ ಸ್ಯಾಮ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಶ್ಯಾಮ್ ಸಿಂಧನೂರು-ಎಸ್.ನಾಗರಾಜ್, ಸಂಕಲನ ಪೂಜಾ.ಎಸ್, ಲಿಖಿತ್ ಫಿಲಂಸ್‌ನ ರಮೇಶ್ ಬಿಡುಗಡೆ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಸಾರಾಗೋವಿಂದು ಮಾತನಾಡಿ “ದ್ದತೆ ಮಾಡಿಕೊಂಡು ಬಾರದಿದ್ದರೆ ಚಿತ್ರ ತಡವಾಗುತ್ತದೆ. ಅನುಭವ ಪಡೆದುಕೊಂಡು ಬಂದರೆ ಇಂತಹ ಕಷ್ಟಗಳು ಬರುವುದಿಲ್ಲವೆಂಬುದು ಈಗಿನ ಪೀಳಿಗೆಯವರು ತಿಳಿದುಕೊಂಡರೆ ಉತ್ತಮ. ಇಬ್ಬರು ನಿರ್ದೇಶಕರು ಕೆಲಸ ಮಾಡಿದ್ದಾರೆ. ಹಿಂದೆ ದೊರೆ-ಭಗವಾನ್ ಎಂತಹ ಒಳ್ಳೆ ಚಿತ್ರಗಳನ್ನು ಕೊಟ್ಟಿದ್ದಾರೆ. ಅವುಗಳು ಇಂದಿಗೂ ಜೀವಂತವಾಗಿದೆ. ಅವರಂತೆ ನಿಮಗೂ ಶ್ರೇಯ ಸಿಗಲಿ. ಹಿಂದೂ ಸಂಸ್ಕ್ರತಿ ಎತ್ತಿ ಹಿಡಿಯುವಂತ ಟೈಟಲ್ ಚಿತ್ರಕ್ಕೆ ಭೂಷಣವಾಗಿದೆ. ತೆರೆಗೆ ಬರುವ ಮುಂಚೆ ಪ್ರಚಾರ ಮಾಡಿದಾಗ ಮಾತ್ರ ಚಿತ್ರವು ಜನರಿಗೆ ತಲುಪುತ್ತದೆಂದು ತಂಡಕ್ಕೆ ಕಿವಿಮಾತು“ ಹೇಳಿ ಗದಾ ಕೇಸರಿಗೆ ಶುಭ ಹಾರೈಸಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಕರ್ನಾಟಕ ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್,ಉಜ್ಜಲ್ ರಘು ಕಾರ್ಯಕ್ರಮದಲ್ಲಿ ಭಾಗಿಯಾಗಿ ಚಿತ್ರತಂಡಕ್ಕೆ ಶುಭಕೋರಿದ್ದರು.